ಬೃಹಸ್ಪತಿ ಎಂಬ ಅಜ್ಜ ಚೆನ್ನೈನ ಪಾವೈ ಪ್ರಕಾಶನದ ಬೆನ್ನು ಹತ್ತಿದಾಗಲೇ ನನಗೆ ಗೊತ್ತಾದದ್ದು - ನನ್ನ ಕ್ಯೂಬಾ ತಮಿಳು ಕ್ಯಾನ್ವಾಸ್ ಕಂಡುಕೊಂಡಿದೆ ಎಂದು.
ಸ್ಪಾನಿಶ್ ನಲ್ಲಿದ್ದ ಚೆಗೆವಾರನ ಬೊಲಿವಿಯಾ ಡೈರಿಯನ್ನು ಓದಿದ ರೀತಿಯಲ್ಲಿಯೇ ತಮಿಳಿಗೆ ಅನುವಾದಗೊಂಡ ನನ್ನ ಕ್ಯೂಬಾವನ್ನು ಓದಿದ್ದೇನೆ. ಇದು ಈಗ ಮಾರುಕಟ್ಟೆಯಲ್ಲಿದೆ.
ಜಿಂದಾಲ್ ನಲ್ಲಿ ಸಮಸ್ಯೆ ರಿಪೇರಿ ಮಾಡುತ್ತಲೇ ಚಿತ್ರ ಬಿಡಿಸುತ್ತಾ ಇದ್ದ ಕಲಾವಿದ ಗೆಳೆಯ ಸೃಜನ್ ಮತ್ತು ನಾನು ಕೈಕುಲುಕಿದ್ದು ಕವಿ ಚಿದಾನಂದ ಸಾಲಿ ಮೂಲಕ. ಕನ್ನಡ - ತೆಲುಗು ಎರಡಕ್ಕೂ ಕೊಂಡಿ ಸೃಜನ್. ಚಿತ್ರ ಬರೆವ ಕೈ ಕ್ಯೂಬಾವನ್ನು ತೆಲುಗಿಗೆ ಅನುವಾದಿಸಿದೆ.
ಸದ್ಯದಲ್ಲೇ ತೆಲುಗು ಆವೃತ್ತಿ ಪ್ರಿಂಟಾಗಲಿದೆ. ಪಲ್ಲವ ಪ್ರಕಾಶನದ ವೆಂಕಟೇಶ್ ತೆಲುಗು ಆವೃತ್ತಿ ಪ್ರಕಟಿಸಲು ಮುಂದಾಗಿದ್ದಾರೆ. ಸುಜ್ಞಾನ ಮೂರ್ತಿ ಅವರ ಒತ್ತಾಸೆ ಅವರ ಬೆನ್ನಿಗಿದೆ. ತೆಲುಗಿನ ವಿದ್ವಾಂಸ ಕೆ ಸಿ ಶಿವಾರೆಡ್ಡಿ ಕೃತಿಗೆ ಮುನ್ನುಡಿ ಬರೆಯುತ್ತಿದ್ದಾರೆ.
ಕಾಶೀನಾಥ ಅಂಬಲಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರು. ಕವಿ, ಪ್ರಕಾಶಕ. ಕ್ಯೂಬಾವನ್ನು ಹಿಂದಿಯ ತೆಕ್ಕೆಗೆ ತಂದಿದ್ದಾರೆ. ದೆಹಲಿಯಲ್ಲಿ ಪ್ರಕಾಶಕರನ್ನು ಹುಡುಕುತ್ತಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಕ್ಯೂಬಾ ಬೆಂಗಾಲಿ ಹಾಗೂ ಮಲಯಾಳಂಗೆ ಅನುವಾದವಾಗಬೇಕು ಎನ್ನುವುದು ನನ್ನ ಬಯಕೆ. ಕ್ಯೂಬಾಗೆ ಸದಾ ಸಾಥ್ ನೀಡಿರುವ ಈ ನೆಲದಲ್ಲಿ ನನ್ನ ಹಾಡೂ ಹರಿದಾಡಲಿ ಎಂಬ ಪುಟ್ಟ ಆಸೆ. ಈಗಾಗಲೇ ಕೊಳ್ಕೊತ್ತಾದಲ್ಲಿರುವ ಸಾಹಿತಿ, ಅನುವಾದಕ ಜಿ ಕುಮಾರಪ್ಪ ಬೆಂಗಾಲಿ ಅನುವಾದಕ್ಕೆ ಸಜ್ಜಾಗಿದ್ದಾರೆ. ಮಲಯಾಳಂ..?
ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು ಬಯಕೆ ಬರುವುದರಕಣ್ಸನ್ನೆ ಕಾಣೋ.....