'ಎಕ್ಕುಂಡಿ ನಮನ'ದ ಎರಡನೇ ಆವೃತ್ತಿ ಸಿದ್ಧವಾಗುತ್ತಿದೆ. ಅದಕ್ಕೆ 'ಅಪಾರ ಮಾಡಿದ ಮುಖಪುಟಗಳು ಇಲ್ಲಿವೆ.
ಸಂತಸ ಮತ್ತು ನೋವು ಎರಡಕ್ಕೂ..
ಇದೊಂದು ಸಂತಸ ಹಾಗೂ ನೋವು ಎರಡನ್ನೂ ತಂದ ಸಂಕಲನ. ಎಕ್ಕುಂಡಿಯವರನ್ನು ಸಾಕಷ್ಟು ಹಚ್ಚಿಕೊಂಡಿದ್ದ ನಾನು ಅವರ ಕೃತಿಗಳ ಬಗ್ಗೆಯಾಗಲೀ, ಅವರ ಬಗ್ಗೆಯಾಗಲೀ ಹೆಚ್ಚಿನದೇನೂ ಬಂದಿಲ್ಲ ಎಂಬುದನ್ನು ಗಮನಿಸಿದ್ದೆ.
ಆ ವೇಳೆಗೆ ಪುತ್ತೂರು ಕರ್ನಾಟಕ ಸಂಘದ ಹಿರಿಯರಾದ ಬೋಳಂತಕೋಡಿ ಈಶ್ವರ ಭಟ್ಟರು ಪರಿಚಯವಾಗಿದ್ದರು. 'ಎಕ್ಕುಂಡಿ ಅವರ ಬಗ್ಗೆ ಯಾಕೆ ಪುಸ್ತಕ ಮಾಡಬಾರದು?' ಎಂದು ಕೇಳಿದೆ. ಆ ಕಾಲಕ್ಕೆ ಅವರ ಪ್ರಕಾಶನ ಇಂತಹ ಆಫ್ ಬೀಟ್ ಕೃತಿಗಳನ್ನು ಕೈಗೆತ್ತಿಕೊಳ್ಳುವ ಸಾಹಸ ಮಾಡಿತ್ತು. 'ನೀವೇ ಎಡಿಟ್ ಮಾಡಿ ಕೊಡುವುದಾದರೆ ಮಾತ್ರ ಮಾಡುತ್ತೇನೆ' ಎಂದು ಬೋಳಂತಕೋಡಿಯವರು ಹೇಳಿದರು. ಆ ಆಸೆ ನನಗೂ ಇತ್ತು.
ಆಗ ನಾನು ಮಂಗಳೂರಿನಲ್ಲಿದ್ದೆ. ಪುಸ್ತಕ ಸಂಪಾದಿಸುವ ಕೆಲಸವನ್ನು ತೀವ್ರವಾಗಿ ಹಚ್ಚಿಕೊಂಡೆ. ಸಾಕಷ್ಟು ಲೇಖನಗಳೂ ಸಿಕ್ಕವು. ನನ್ನ ಮತ್ತೊಬ್ಬ ಪ್ರೀತಿಯ ಗೆಳೆಯ ಮೋಹನ ಸೋನ ಮುಖಪುಟವನ್ನು ರಚಿಸಿದರು. ಇನ್ನೇನು ಪುಸ್ತಕ ಬಿಡುಗಡೆಗೆ ಸಜ್ಜಾಗುವ ವೇಳೆಗೆ 'ಎಕ್ಕುಂಡಿ ಇನ್ನಿಲ್ಲ' ಎನ್ನುವ ಸುದ್ದಿ ಬಂತು. ಎಕ್ಕುಂಡಿಯವರ ಸಮ್ಮುಖದಲ್ಲಿ ಪುತ್ತೂರಿನಲ್ಲಿ ಅವರಿಗೆ ಅರ್ಪಣೆಯಾಗಬೇಕಿದ್ದ ಪುಸ್ತಕ ಅವರು ಇಲ್ಲವಾದ ನಂತರ ಅವರ ನೆನಪಿಗೆ ಸಲ್ಲಿಸಿದ ಕಾಣಿಕೆಯಾಗಿ ಹೋಯಿತು. ಎಕ್ಕುಂಡಿಯವರ ಸಂಗಾತಿ ಇಂದಿರಾ ಎಕ್ಕುಂಡಿ, ಸುಮತೀಂದ್ರ ನಾಡಿಗ ಅವರು ಪುಸ್ತಕ ಬಿಡುಗಡೆಯಲ್ಲಿದ್ದರು.
ಈ ಪುಸ್ತಕ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಪ್ರೊ ಕು ಶಿ ಹರಿದಾಸಭಟ್ಟರು 'ಉದಯವಾಣಿ'ಯಲ್ಲಿ, ಟಿ ಪಿ ಅಶೋಕ ಅವರು 'ಪ್ರಜಾವಾಣಿ'ಯಲ್ಲಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಯೂರದಲ್ಲಿ ಈ ಬಗ್ಗೆ ಬರೆದರು.