ಕ್ಯೂಬಾ ಪುಸ್ತಕವನ್ನು ಯಾರೂ ನನ್ನೊಬ್ಬನ ಕೃತಿಯಾಗಿ ನೋಡಿಯೇ ಇಲ್ಲ. ಇದು ನನ್ನ, ಸುದೇಶ್ ಮಹಾನ್ ಹಾಗೂ ಪ ಸ ಕುಮಾರ್ ಹೀಗೆ ಮೂವರ ಕೃತಿ ಎಂದೇ ಪರಿಗಣಿಸಿದ್ದಾರೆ.
ಇದಕ್ಕೆ ಕಾರಣ ಕೃತಿಗೆ ಇರುವ ಕಾಡುವ ಮುಖಪುಟ. ಸುದೇಶ್ ಮಹಾನ್ ಗೂ ಸಹಾ ಕ್ಯೂಬಾ, ಚೆಗೆವಾರ, ಕ್ಯಾಸ್ಟ್ರೋ ಎಂದರೆ ನನ್ನಂತೆಯೇ ಅಗಾಧ ಪ್ರೀತಿ. ಆದಕಾರಣ ತನ್ನನ್ನಿಡೀ ಪುಸ್ತಕದಲ್ಲಿ ತೊಡಗಿಸಿಕೊಂಡು ಬಿಟ್ಟ. ಪರಿಣಾಮ ಈ ಮುಖಪುಟ. ಇದಲ್ಲದೆ ಈ ಕೃತಿಯ ಪ್ರತೀ ಅಧ್ಯಾಯಕ್ಕೂ ತನ್ನದೇ ವಿಶಿಷ್ಟ ಶೈಲಿಯಲ್ಲಿ ಹೆಡ್ಡಿಂಗ್ ಬಿಡಿಸಿದ್ದಾನೆ.
ಈ ಎರಡಕ್ಕೂ ಸವಾಲು ಎನ್ನುವಂತೆ ಒಳಚಿತ್ರಗಳನ್ನು ಬರೆದವರು ಹಿರಿಯರಾದ ಪ ಸ ಕುಮಾರ್. ಪ ಸ ಕುಮಾರ್ ಬರೀ ಚಿತ್ರ ಬರೆದು ಕೊಡುವುದಿಲ್ಲ ಅವರು ಯಾವಾಗಲೂ ಕ್ರುತಿಯೊಂದಿಗೆ ಜುಗಲಬಂದಿ ನಡೆಸುತ್ತಾರೆ. ಹಾಗಾಗಿಯೇ ಈ ಕೃತಿಯ ಒಂದೊಂದು ಚಿತ್ರವೂ ಕಾಡುವಂತೆ ಬಂದಿದೆ. ಕವಿತೆಯಂತೆ ಮೂಡಿದೆ. ಪ ಸಕುಮಾರ್ ಬರೆದ ಎಲ್ಲಾ ಚಿತ್ರಗಳೂ ಇನ್ನೊಂದು ಪೋಸ್ಟ್ ನಲ್ಲಿದೆ. ನೋಡಿ
ಈ ಬಾರಿ ಸೃಜನ್ ಮತ್ತು ಅಪಾರ
ಎರಡನೆಯ ಆವೃತ್ತಿಗೆ ಬದಲಾದ ಮುಖಪುಟ ಇದು. ಚನ್ನಬಸವಣ್ಣ ಅವರು ಕೆಲ ತಿಂಗಳಲ್ಲಿಯೇ ಈ ಕೃತಿಯ ೨೦೦೦ ಪ್ರತಿಗಳನ್ನು ಖರ್ಚು ಮಾಡಿ ಎರಡನೆಯ ಮುದ್ರಣಕ್ಕೆ ಹಸಿರು ನಿಶಾನೆ ತೋರಿಸಿದರು.
ಆಗ ಮುಖಪುಟ ಬದಲಾದರೆ ಇನ್ನೊಂದು ಮುದ್ರಣವಾಗಿದೆ ಎಂದು ಗೊತ್ತಾಗುತ್ತದೆಯಲ್ಲ ಎನ್ನುವ ಆಲೋಚನೆ ಬಂತು. ಆಗ ನಾನು ಕಾಡಿದ್ದು ಗೆಳೆಯ ಸೃಜನ್ ನನ್ನು. ಸೃಜನ್ ಮೂರು ಚಿತ್ರ ಬರೆದರು. ಆ ವೇಳೆಗೆ ಪರಿಚಯವಾಗಿ ತೀರಾ ಹತ್ತಿರವಾಗಿದ್ದ ಅಪಾರ ಅವರಿಗೆ ಚಿತ್ರಗಳನ್ನು ಕಳಿಸಿದೆ. ಅಪಾರ ಮಾಡಿದ ವಿನ್ಯಾಸ ಇಲ್ಲಿದೆ.
ಈ ಮುಖಪುಟಕ್ಕೂ ಹಳೆಯ ಮುಖಪುಟಕ್ಕೂ ತಾಳೆ ಹಾಕಿನೋಡುವವರ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ. ನನಗಂತೂ ಈ ಮುದ್ರಣದಲ್ಲಿ ಬಳಸಿರುವ ಬಿಳಿ ಹಾಗೂ ಪಿಂಕ್ ಬಣ್ಣಗಳು ತೀರಾ ಇಷ್ಟವಾಯಿತು. ಅದರ ಜೊತೆಗೆ ಅಪಾರ ತನ್ನದೇ ಶೈಲಿಯಲ್ಲಿ ನನ್ನ ಕೃತಿಯೂಳಗಿದ್ದ ಒಂದು ಸಾಲನ್ನು ಮುಖಪುಟಕ್ಕೆ ಅಳವಡಿಸಿದರು. ಇದು ಕೃತಿಯ ಎಲ್ಲವನ್ನೂ ಒಂದು ಸಾಲಲ್ಲಿ ಹೇಳಿಬಿಟ್ಟಿತು ಅನಿಸಿತು. ಆನಂತರ ಈ ಕೃತಿ ಇನ್ನೂ ಎರಡು ಮುದ್ರಣ ಕಂಡಿತು. ಆ ಎರಡಕ್ಕೂ ಇದೇ ಮುಖಪುಟವಿದೆ.