'ಸೋನೆ ಮಳೆಯ ಸಂಜೆ' ನನ್ನ ಮೊದಲ ಸಂಕಲನ. ಅಕ್ಷರ ಪ್ರಕಾಶನದಿಂದ ಪ್ರಕಟವಾದದ್ದು. ೧೯೯೨ ರಲ್ಲಿ ಈ ಸಂಕಲನ ಪ್ರಕಟವಾದರೂ ಸಹಾ ಇಲ್ಲಿರುವುದು ನಾನು ೧೯೮೭ ರವರೆಗೆ ಬರೆದ ಕವಿತೆಗಳು. ಸಂಕಲನ ಮಾದಬೇಕೇಕೆ? ಎನ್ನುವ ಕಾರಣಕ್ಕೆ ಹಾಗೆ ಮೂಲೆಯಲ್ಲಿಟ್ಟಿದ್ದೆ. ಮಾಡಬೇಕು ಎನಿಸಿದಾಗ ಜಿ ಎಸ್ ಸದಾಶಿವರೇ ಬೆನ್ನುಡಿ ಬರೆಯಬೇಕು ಎಂಬ ಕಾರಣಕ್ಕೆ ಒಂದು ವರ್ಷ ಕಾದೆ.
ಗೆಳೆಯ ಸುದೇಶ್ ಮಹಾನ್ ಮುಖಪುಟ ಮಾಡಿದ. ನನ್ನ ಪ್ರೀತಿಯ ಕವಿ ಸು ರಂ ಎಕ್ಕುಂಡಿ ಅವರು ಮುನ್ನುಡಿ ಬರೆದಿದ್ದರು. ಕೆ ವಿ ಸುಬ್ಬಣ್ಣ ಅವರ ಪ್ರೀತಿಯಿಂದಾಗಿ ಸಂಕಲನ ಬೆಳಕು ಕಂಡಿತು.
ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗಳೂರಿಗೆ ವರ್ಗಾ ಆದ ವೇಳೆ ಪುಸ್ತಕ ಬಿಡುಗಡೆ ಮಾಡಿ ಮುಗಿಸಿಬಿಡೋಣ ಎಂದು ಮನಸ್ಸು ಮಾಡಿದೆ. ಆಗ ಸಾಥ್ ಕೊಟ್ಟದ್ದು 'ಪ್ರಯೋಗ ರಂಗ'ದ ನಾಗರಾಜ ಮೂರ್ತಿ. ರವೀಂದ್ರ ಕಲಾಕ್ಷೇತ್ರದ ಹೆಬ್ಬಾಗಿಲಿನಲ್ಲಿಯೇ ಆಕರ್ಷಕ ಸ್ಟೇಜ್ ನಿರ್ಮಿಸಿ ಬಿಡುಗಡೆ ಮಾಡಿಸಿಯೇ ಬಿಟ್ಟ. ಬರಗೂರು ರಾಮಚಂದ್ರಪ್ಪ, ಎಚ್ ಎಸ್ ರಾಘವೇಂದ್ರ ರಾವ್ ಹಾಗೂ ಎಕ್ಕುಂಡಿ ವೇದಿಕೆಯಲ್ಲಿದ್ದರು.
ಈ ಸಂಕಲನಕ್ಕೆ 'ಸೋನೆ ಮಳೆಯ ಸಂಜೆ' ಎಂದು ಹೆಸರಿಡಬೇಕೋ ಇಲ್ಲಾ 'ಹಲವಾರು ಲೆಬನಾನ್..' ಎಂದು ಹೆಸರಿಡಬೇಕೋ ಎನ್ನುವ ತುಯ್ದಾಟ ಹಲವು ಕಾಲ ನನ್ನನ್ನು ಕಾಡಿತ್ತು.